ಕಿಸೆಯ ಮತಕ್ಷೇತ್ರ

 1832ಕ್ಕೆ ಹಿಂದಿನ ಇಂಗ್ಲೆಂಡಿನಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬದ ಹಿಡಿತದಲ್ಲಿದ್ದ ಪಾರ್ಲಿಮೆಂಟರಿ ಮತಕ್ಷೇತ್ರ (ಪಾಕೆಟ್ ಬರೋ). ಒಂದು ಜಿಲ್ಲೆ ಅಥವಾ ಒಂದು ಪಟ್ಟಣದ ವ್ಯಾಪ್ತಿಗೆ ಒಳಪಟ್ಟ ಇಂಥ ಒಂದೊಂದು ಕ್ಷೇತ್ರದಿಂದಲೂ ಒಬ್ಬೊಬ್ಬ ಪ್ರತಿನಿಧಿಯನ್ನು ಪಾರ್ಲಿಮೆಂಟಿಗೆ ಆಯ್ಕೆ ಮಾಡುವ ಅಧಿಕಾರ ದತ್ತವಾದಾಗ ಕೆಲವು ಕ್ಷೇತ್ರಗಳು ವಿಶಿಷ್ಟ ಹಿತಗಳ ವಶವರ್ತಿಯಾದುವಲ್ಲದೆ, ನಾನಾ ಬಗೆಯ ಭ್ರಷ್ಟಾಚಾರಗಳಿಗೆ ನೆಲೆಯಾದುವು.

 ಮೂರನೆಯ ಹೆನ್ರಿಯ ಕಾಲದಿಂದಲೇ ಪಾರ್ಲಿಮೆಂಟಿಗೆ ಈ ಕ್ಷೇತ್ರಗಳಿಂದ ಪ್ರತಿನಿಧಿಗಳನ್ನು ಆಯಾ ನಗರಗಳ ಷೆರಿಫರು ಆರಿಸಿ ಕಳುಹಿಸುತ್ತಿದ್ದರು. ಈ ವ್ಯವಸ್ಥೆಗೆ ತಗಲುತ್ತಿದ್ದ ಅಧಿಕ ವೆಚ್ಚದಿಂದಾಗಿ ಆರಂಭದಲ್ಲಿ ಅನೇಕ ಕ್ಷೇತ್ರಗಳು ಇಂಥ ಅಧಿಕಾರವನ್ನು ಬಯಸಲಿಲ್ಲ. 15ನೆಯ ಶತಮಾನದ ನಡುಗಾಲದ ವೇಳೆಗೆ ಈ ಕ್ಷೇತ್ರಗಳಿಂದ ಪ್ರಾತಿನಿಧ್ಯ ಪಡೆಯುವುದು ಆಕರ್ಷಕವಾಗಿ ಪರಿಣಮಿಸಿತು. ಆರನೆಯ ಎಡ್ವರ್ಡ್ ಅನೇಕ ಹೊಸ ಮತಕ್ಷೇತ್ರಗಳನ್ನು ನಿರ್ಮಿಸಿದ. ಯಾವಯಾವ ಕ್ಷೇತ್ರಗಳಿಂದ ಆರಿಸಿ ಬರುವ ಪ್ರತಿನಿಧಿಗಳು ತನಗೆ ಬೆಂಬಲ ನೀಡುವರೆಂದು ಆತನಿಗೆ ಭರವಸೆಯಿತ್ತೋ ಆ ಕ್ಷೇತ್ರಗಳಿಗೆಲ್ಲ ಮತಾಧಿಕಾರ ಲಭ್ಯವಾಯಿತು.

 ಕಾಮನ್ಸ್ ಸಭೆ ಅರಸೊತ್ತಿಗೆಯ ಹಿಡಿತದಲ್ಲಿರಲೆಂದು ಹಳ್ಳಿಗಳನ್ನು ಸಹ ಮತ ಕ್ಷೇತ್ರಗಳನ್ನಾಗಿ ಪರಿವರ್ತಿಸಿದ್ದರಿಂದ ಇವುಗಳ ಸಂಖ್ಯೆ ಅಧಿಕವಾಯಿತು. ಅನಂತರ ಅರಸಾಜ್ಞೆ ಮತ್ತು ಪಾರ್ಲಿಮೆಂಟಿನ ಸಮಿತಿಗಳ ಮೂಲಕ ನಿಯಂತ್ರಿತವಾದ ಮತದಾನದಿಂದಾಗಿ ಈ ಕ್ಷೇತ್ರಗಳ ಚುನಾವಣೆಗಳು ಅರಸರ ಮತ್ತು ವೈಯುಕ್ತಿಕ ಹಿತಾಸಕ್ತಿಗಳ ಬಿಗಿಮುಷ್ಟಿಯಲ್ಲಿದ್ದುವು. ಆಗ ಒಟ್ಟು 200ಕ್ಕೂ ಹೆಚ್ಚು ಕ್ಷೇತ್ರಗಳಿದ್ದವು.

 16ನೆಯ ಶತಮಾನದ ಆರಂಭದಲ್ಲಿ ಕಾಮನ್ಸ್ ಸಭೆಯ ಸ್ಥಾನಗಳಿಗೆ ಬೆಲೆ ಅಧಿಕವಾದಾಗ ಆಸ್ಥಾನಿಕರೂ ನ್ಯಾಯವಾದಿಗಳೂ ಜಮೀನುದಾರರೂ ಈ ಮತಕ್ಷೇತ್ರಗಳನ್ನು ಹಣ ಸುರಿದು ವಶಪಡಿಸಿಕೊಳ್ಳಲಾರಂಭಿಸಿದರು. ಅಂದಿನ ಪದ್ಧತಿಯಂತೆ ಅಭ್ಯರ್ಥಿಗಳೇ ಚುನಾವಣೆಯ ಎಲ್ಲ ವೆಚ್ಚವನ್ನೂ ಭರಿಸುತ್ತಿದ್ದರು. ಇದರಿಂದಾಗಿ ಅಂಥವರೇ ಪುನಃ ಪುನಃ ಆಯ್ಕೆ ಹೊಂದಲು ಅವಕಾಶವಿರುತ್ತಿತ್ತು. ಆ ಪ್ರತಿನಿಧಿ ಅತ್ಯಂತ ಪ್ರಭಾವಶಾಲಿಯಾಗಿರುತ್ತಿದ್ದ. 18ನೆಯ ಶತಮಾನದಲ್ಲಂತೂ ಇಂಥ ಮತ ಕ್ಷೇತ್ರಗಳ ಹಾವಳಿ ಹೆಚ್ಚಾಗಿತ್ತು. ಇವನ್ನು ತಮ್ಮ ಕಿಸೆಯಲ್ಲಿಟ್ಟುಕೊಳ್ಳುವ ಸಲುವಾಗಿ ಸ್ವರ್ಧಿಗಳು ನಾನಾ ಬಗೆಯ ಪ್ರಭಾವ ಬೀರುತ್ತಿದ್ದರು. ಹಣದ ಪ್ರಲೋಭನ, ಬೆದರಿಕೆ ಮುಂತಾದ ಮಾರ್ಗಗಳನ್ನನುಸರಿಸಲಾಗುತ್ತಿತ್ತು. ಸರ್ಕಾರವೇ ಇಂಥ ಪ್ರಭಾವೀಶಕ್ತಿಗಳ ಬೆಂಬಲ ಪಡೆಯುತ್ತಿತ್ತು. ಒಮ್ಮೊಮ್ಮೆ ಧರ್ಮಸಂಸ್ಥೆಗಳು ಕೂಡ ತಮ್ಮ ಪ್ರಭಾವವನ್ನು ಉಪಯೋಗಿಸುತ್ತಿದ್ದುವು.

 ಈ ಅನಿಷ್ಟಕಾರಿ ಪ್ರವೃತ್ತಿಗಳನ್ನು ತಡೆಗಟ್ಟಲು ಅನೇಕ ಸುಧಾರಣೆಗಳಾದುವು. ಆದರೂ 18ನೆಯ ಶತಮಾನದ ಕೊನೆಯ ಹೊತ್ತಿಗೆ ಈ ಕ್ಷೇತ್ರಗಳು ಭ್ರಷ್ಟಾಚಾರದ ತುಟ್ಟ ತುದಿಯನ್ನು ತಲಪಿದ್ದುವು. ಇದಕ್ಕೆ ಇದ್ದ ಮೂರು ಕಾರಣಗಳೆಂದರೆ: ಅಧಿಕೈಶ್ವರ್ಯ, ಗಮನಾರ್ಹವಾಗಿ ಬದಲಾದ ಜನಸಂಖ್ಯೆ ಮತ್ತು ಜಮೀನ್ದಾರರ ಶಕ್ತಿರಾಜಕೀಯ. ಕಿಸೆಯ ಮತಕ್ಷೇತ್ರಗಳನ್ನು ಕೊಳ್ಳಬಹುದಾಗಿತ್ತು, ಮಾರಬಹುದಾಗಿತ್ತು ಮತ್ತು ವಂಶಪಾರಂಪರ್ಯವಾಗಿ ಅನುಭವಿಸಬಹುದಾಗಿತ್ತು. ಕೆಳಮನೆಯ ಬಹುಪಾಲು ಸದಸ್ಯರು ಇಂಥ ಕ್ಷೇತ್ರಗಳಿಂದ ಆರಿಸಿ ಬಂದವರಾಗಿದ್ದರು. ಇವರು ಯಾವುದೇ ರೀತಿಯಲ್ಲೂ ಸ್ವತಂತ್ರರಾಗಿರಲಿಲ್ಲ. ಕೆಲವರು ತಮ್ಮ ಸ್ಥಾನಗಳನ್ನು ಮಾರಿಕೊಂಡರೆ ಇನ್ನು ಕೆಲವರು ಅನೇಕ ಉನ್ನತ ಹುದ್ದೆಗಳಿಗಾಗಿ ಅಥವಾ ಶ್ರೀಮಂತ ಪದವಿಗಳಿಗಾಗಿ ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಿದ್ದರು. ಪುರಸಭೆಯ ಆಡಳಿತದಲ್ಲಿ ಕೂಡ ಭ್ರಷ್ಠಾಚಾರ ತಾಂಡವವಾಡುತ್ತಿತ್ತು. ಕಿಸೆಯ ಮತಕ್ಷೇತ್ರಗಳನ್ನು ಕೊಳೆತ ಮತಕ್ಷೇತ್ರಗಳೆಂದೂ ಕರೆಯಲಾಗುತ್ತಿತ್ತು. ಅವುಗಳ ಮೂಲಕ ಜಮೀನ್ದಾರರು ಪಾರ್ಲಿಮೆಂಟಿನಲ್ಲಿ ಅತ್ಯಧಿಕ ಪ್ರಭಾವಶಾಲಿಗಳಿಗಾಗಿ ಪರಿಣಮಿಸಿದ್ದರು. ಕಾಯಿದೆಗಳನ್ನು ತಮ್ಮಿಚ್ಛೆಯಂತೆ ರಚಿಸುತ್ತಿದ್ದರು. 1872ರಲ್ಲಿ ಮತಚೀಟಿಯನ್ನು (ಬ್ಯಾಲಟ್ ಪೇಪರ್) ಜಾರಿಗೆ ತರುವವರೆಗೂ ಇವುಗಳ ಕೆಟ್ಟ ಪ್ರಭಾವ ಮುಂದುವರಿಯಿತು.

 1832ರಲ್ಲಿ ಜಾರಿಗೆ ತರಲಾದ ಒಂದು ಸುಧಾರಣೆಯಿಂದ ಅನೇಕ ಕ್ಷೇತ್ರಗಳ ಪ್ರಾತಿನಿಧ್ಯವನ್ನು ಕಸಿದುಕೊಳ್ಳಲಾಯಿತು. ಕ್ಷೇತ್ರಗಳನ್ನು ಮತದಾರರ ಸಂಖ್ಯೆಗಳಿಗೆ ಅನುಗುಣವಾಗಿ ಸಮನಾಗಿ ವಿಂಗಡಿಸಲಾಯಿತು. ಅನಂತರ ಇನ್ನೂ ಅನೇಕ ಸುಧಾರಣೆಗಳು ಜಾರಿಗೆ ಬಂದುವು. 1918ರಲ್ಲಿ ಮತಕ್ಷೇತ್ರಗಳನ್ನು ಪುನರ್ ವಿಂಗಡಿಸಲಾಯಿತು. ಜಮೀನುದಾರರು ಪಡೆದಿದ್ದ ಅನೇಕ ವಿಶೇಷ ಸೌಲಭ್ಯಗಳ ರದ್ದಾದ್ದು 1918ರಲ್ಲಿ. ಇಂಗ್ಲೆಂಡಿನ ಪ್ರಜಾಪ್ರಭುತ್ವವನ್ನು ಇವುಗಳ ದುಷ್ಟ ಪ್ರಭಾವದಿಂದ ಸಂಪೂರ್ಣವಾಗಿ ರಕ್ಷಿಸುವುದು ದೀರ್ಘ ಶ್ರಮದಿಂದ ಸಾಧ್ಯವಾಯಿತು.          

(ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ